ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸಮುದಾಯ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರು ಬಂಟರ ಸಂಘವು ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಸಮಾಜದ ಏಳಿಗೆಗಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಸಂಘದ ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಮುಕ್ತಾಯಗೊಳ್ಳಲಿದ್ದು, 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಶೀಘ್ರದಲ್ಲೇ ಚುನಾವಣೆ ನಡೆಯಲಿರುವುದು ಸಂಘದ ಸದಸ್ಯರ ಗಮನ ಸೆಳೆದಿದೆ.
ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಹಲವು ಘಟಾನುಘಟಿಗಳು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿರುವುದು ತಿಳಿದುಬಂದಿದೆ. ಈಗಾಗಲೇ ಡಾ. ದೀಪಕ್ ಶೆಟ್ಟಿಯವರು ಬಹಿರಂಗವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ವಿವಿಧ ಘಟಕಗಳ ಸದಸ್ಯರನ್ನು ಭೇಟಿ ಮಾಡಿ ಬೆಂಬಲ ಕೋರಲು ಆರಂಭಿಸಿದ್ದಾರೆ.
ಇದೀಗ ಡಾ. ದೀಪಕ್ ಶೆಟ್ಟಿಯವರಿಗೆ ಪ್ರತಿಸ್ಪರ್ಧಿಯಾಗಿ ಮಹಿಳಾ ಉದ್ಯಮಿ ಹಾಗೂ ಸಮಾಜಸೇವಕಿ ಶ್ರೀಮತಿ ಕಾಂತಿ ಶೆಟ್ಟಿಯವರು ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಸಂಘದ ಸದಸ್ಯರ ವಲಯದಲ್ಲಿ ಈ ಕುರಿತು ಚರ್ಚೆಗಳು ಜೋರಾಗಿವೆ.
ಕಾಂತಿ ಶೆಟ್ಟಿಯವರು ಈ ಹಿಂದೆ ನಡೆದ ಚುನಾವಣೆಯಲ್ಲಿ ಗೆದ್ದು ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ, ಬಳಿಕ ಜೊತೆ ಕಾರ್ಯದರ್ಶಿಯಾಗಿ ಹಾಗೂ ಮಹಿಳಾ ಉಪಾಧ್ಯಕ್ಷೆಯಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ತಮ್ಮ ಕಾರ್ಯಾವಧಿಯಲ್ಲಿ ಸಂಘದ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆ ಹಾಗೂ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಮೂಲಕ ಗುರುತಿಸಿಕೊಂಡಿದ್ದಾರೆ.
Also Read: ‘ಕೊಲ್ಲೂರು ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಸುಖಾನಂದ ಶೆಟ್ಟಿಯವರಿಗೆ ಡಾಕ್ಟರೇಟ್.
ಸಮಾಜಸೇವೆಯಲ್ಲಿಯೂ ಸಕ್ರಿಯವಾಗಿರುವ ಕಾಂತಿ ಶೆಟ್ಟಿಯವರು ಸಂಘದ ಅಭಿವೃದ್ಧಿ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ನೇರ, ನಿಷ್ಪಕ್ಷಪಾತ ಹಾಗೂ ಕರ್ತವ್ಯನಿಷ್ಠ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಮಹಿಳೆಯರ ಭಾಗವಹಿಸುವಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅವರು ಹಲವಾರು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿರುವುದಾಗಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಶ್ರೀಮತಿ ಸುಶೀಲ ಪಿ. ಶೆಟ್ಟಿಯವರ ನಂತರ ಬೆಂಗಳೂರು ಬಂಟರ ಸಂಘಕ್ಕೆ ಮಹಿಳಾ ಅಧ್ಯಕ್ಷೆಯೊಬ್ಬರು ಆಯ್ಕೆಯಾಗಿಲ್ಲ. ಈ ಹಿನ್ನೆಲೆ ಕಾಂತಿ ಶೆಟ್ಟಿಯವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ ಅದು ಸಂಘದ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಘಟ್ಟವಾಗಲಿದೆ ಎಂಬ ಅಭಿಪ್ರಾಯ ಸದಸ್ಯರ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ಅಂತಿಮವಾಗಿ ಯಾರು ಕಣಕ್ಕಿಳಿಯಲಿದ್ದಾರೆ ಮತ್ತು ಸದಸ್ಯರ ಬೆಂಬಲ ಯಾರಿಗೆ ದೊರೆಯಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಬೆಂಗಳೂರು ಬಂಟರ ಸಂಘದ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ.
Buntara Sangha Bangalore Election – Kanti Shetty to contest against Dr Deepak Shetty


