ಕುಂದಾಪುರ: ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ವಿವಿಧ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಸಮಾಜಸೇವಕ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಶೇರ್ಡಿ ಗೈನಾಡಿಮನೆ ಅವರು ಪ್ರತಿಷ್ಠಿತ ಕುಂದಾಪುರ ತಾಲೂಕು ಯುವ ಬಂಟರ ಸಂಘದ 2026-28ನೇ ಸಾಲಿನ ಗೌರವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮೂಲತಃ ಕುಂದಾಪುರದವರಾದ ಪ್ರಕಾಶ್ ಶೆಟ್ಟಿ ಅವರು ಪ್ರಸ್ತುತ ದಾಂಡೇಲಿಯಲ್ಲಿ ಶ್ರೀ ದುರ್ಗಾ ಕನ್ಸ್ಟ್ರಕ್ಷನ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಹಾಗೂ ಶ್ರೀ ದುರ್ಗಾ ಹಾರ್ಡ್‌ವೇರ್ ಮತ್ತು ಪೇಂಟ್ಸ್ ಸಂಸ್ಥೆಯ ಆಡಳಿತ ಪಾಲುದಾರರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದ್ಯಮ ಕ್ಷೇತ್ರದ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಪ್ರಕಾಶ್ ಶೆಟ್ಟಿ ಅವರು ದಾಂಡೇಲಿಯ ಕಲಾಶ್ರೀ ಸಂಸ್ಥೆ ಹಾಗೂ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಶಂಕನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಮಂಗಳೂರಿನ ಪಟ್ಲ ಫೌಂಡೇಶನ್ ಟ್ರಸ್ಟಿಯಾಗಿ, ರೋಟರಿ ಎಜುಕೇಶನ್ ಸೊಸೈಟಿ ದಾಂಡೇಲಿ ಉಪಾಧ್ಯಕ್ಷರಾಗಿ, ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾಗಿ, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಶೇರ್ಡಿ-ಕಕ್ಕುಂಜೆ ಅಧ್ಯಕ್ಷರಾಗಿ ಹಾಗೂ ಶ್ರೀ ಕಂಬಿಕಾಲು ಮಹಾಗಣಪತಿ ದೇವಸ್ಥಾನ, ಕಕ್ಕುಂಜೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಸೈಂಟ್ ಮಿಚೆಲೆ ಕಾನ್ವೆಂಟ್ ಸ್ಕೂಲ್, ದಾಂಡೇಲಿಯ ರಕ್ಷಕ-ಶಿಕ್ಷಕ ಸಂಘದ ಮಾಜಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ರೋಟರಿ ಕ್ಷೇತ್ರದಲ್ಲಿಯೂ ಪ್ರಕಾಶ್ ಶೆಟ್ಟಿ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. 2018-19ನೇ ಸಾಲಿನಲ್ಲಿ ರೋಟರಿ ಅಧ್ಯಕ್ಷರಾಗಿದ್ದ ವೇಳೆ ‘ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್’ ಪಡೆದಿದ್ದು, 2022-23ನೇ ಸಾಲಿನಲ್ಲಿ ರೋಟರಿ ಜಿಲ್ಲೆ 3170ರ ಅಸಿಸ್ಟೆಂಟ್ ಗವರ್ನರ್ ಆಗಿ ಕಾರ್ಯನಿರ್ವಹಿಸಿ ‘ಬೆಸ್ಟ್ ಅಸಿಸ್ಟೆಂಟ್ ಗವರ್ನರ್ ಅವಾರ್ಡ್’ಗೂ ಭಾಜನರಾಗಿದ್ದಾರೆ.
ಶ್ರೀ ಶೇಖರ್ ಶೆಟ್ಟಿ ಹಾಗೂ ಶ್ರೀಮತಿ ಜಲಜಮ್ಮ ಶೆಟ್ಟಿ ದಂಪತಿಗಳ ಪುತ್ರರಾಗಿರುವ ಪ್ರಕಾಶ್ ಶೆಟ್ಟಿ ಅವರು ಕುಂದಾಪುರದಲ್ಲಿ ಜನಿಸಿ, ಬಿ.ಕಾಂ ಪದವಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ದಾಂಡೇಲಿಯಲ್ಲಿ ಉದ್ಯಮ ಆರಂಭಿಸಿ, ಉದ್ಯಮ ಹಾಗೂ ಸಮಾಜಸೇವೆಯ ಮೂಲಕ ವಿಶಿಷ್ಟ ಗುರುತನ್ನು ಸಂಪಾದಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ 2026-28ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಡಾ. ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷರಾಗಿ, ಪ್ರವೀಣ್ ಕುಮಾರ್ ಶೆಟ್ಟಿ ಹರ್ಕೂರು ಕಾರ್ಯದರ್ಶಿಯಾಗಿ ಹಾಗೂ ಅರುಣ್ ಕುಮಾರ್ ಶೆಟ್ಟಿ ಕುಂದಾಪುರ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ನಿತೇಶ್ ಶೆಟ್ಟಿ ಬಸ್ರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


