bunt community upliftment shashidhar shetty baroda statement

ಬಂಟ ಸಮಾಜದ ತಳಮಟ್ಟದ ಜನರನ್ನು ಮೇಲಕ್ಕೆತ್ತಲು ಸಂಘಟಿತ ಪ್ರಯತ್ನ ಅಗತ್ಯ: ಶಶಿಧರ ಶೆಟ್ಟಿ ಬರೋಡ

ಮಂಗಳೂರು: ಬಂಟ ಸಮಾಜದ ತಳಮಟ್ಟದಲ್ಲಿರುವ ಜನರನ್ನು ಆರ್ಥಿಕವಾಗಿ ಮೇಲಕ್ಕೆತ್ತುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳು ನಡೆಯಬೇಕು. ಪ್ರತಿಯೊಬ್ಬ ಬಂಟರೂ ಬಿಪಿಎಲ್ ಕಾರ್ಡ್‌ನಿಂದ ಮುಕ್ತರಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾ ನಿರ್ದೇಶಕ ಹಾಗೂ ಬರೋಡ ಶಶಿ ಕ್ಯಾಟರಿಂಗ್‌ನ ಆಡಳಿತ ನಿರ್ದೇಶಕ ಶಶಿಧರ ಶೆಟ್ಟಿ ಬರೋಡ ಹೇಳಿದರು.

ಬಂಟ್ಸ್ ಹಾಸ್ಟೆಲ್‌ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಂಟರಲ್ಲಿ ಛಲ ಮತ್ತು ಸಾಧಿಸುವ ಮನೋಭಾವ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಕಳೆದ ಏಳೆಂಟು ವರ್ಷಗಳಿಂದ ಬಡವರ ಕಣ್ಣೀರು ಒರೆಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಈವರೆಗೆ 25 ಕೋಟಿ ರೂ.ಗೂ ಅಧಿಕ ಪರಿಹಾರ ಧನವನ್ನು ಬಡವರು ಹಾಗೂ ಅಗತ್ಯವಿರುವವರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.

ಮೂಲ್ಕಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಸಭಾಭವನದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಯಾಗಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಎಲ್ಲರೂ ಸಾಕ್ಷಿಯಾಗಬೇಕು ಎಂದು ಶಶಿಧರ ಶೆಟ್ಟಿ ಬರೋಡ ಹೇಳಿದರು.

ಬಂಟ ಸಮಾಜದಲ್ಲಿ ಅನೇಕ ಸಾಧಕರು ಸಮಾಜಕ್ಕೆ ದಾರಿದೀಪವಾಗಿದ್ದಾರೆ. ಡಾ. ಕೆ. ಪ್ರಕಾಶ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿಕಿರಣ್ ಶೆಟ್ಟಿ ಹಾಗೂ ರಾಕ್ಷಿ ಬಿಲ್ಡರ್ಸ್‌ನ ರಾಜೇಶ್ ಶೆಟ್ಟಿ ಸೇರಿದಂತೆ ಹಲವು ಮಂದಿ ತಮ್ಮ ಸಾಧನೆಯ ಮೂಲಕ ಸಮಾಜದ ಹೆಮ್ಮೆ ಹೆಚ್ಚಿಸಿದ್ದಾರೆ. ಇಂತಹ ಸಾಧಕರಿಂದ ಯುವ ಪೀಳಿಗೆ ಪ್ರೇರಣೆ ಪಡೆಯಬೇಕು ಎಂದರು.

ಬಂಟ ಸಮಾಜವು ಇತರ ಸಮಾಜಗಳಿಗೆ ಮಾದರಿಯಾಗುವ ರೀತಿಯಲ್ಲಿ ಮುನ್ನಡೆಯಬೇಕು. ಸಮಾಜದ ಒಳಿತಿಗಾಗಿ ಉತ್ತಮ ಕಾರ್ಯಗಳನ್ನು ಕೈಗೊಂಡಾಗ ಪರ-ವಿರೋಧದ ಚರ್ಚೆಗಳು ನಡೆಯುವುದು ಸಹಜ. ಆದರೆ, ಅವುಗಳನ್ನು ಬದಿಗಿಟ್ಟು ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.

ಬಡತನದ ನೋವು ಅರಿತಿದ್ದೇನೆ: ರಾಜೇಂದ್ರ ಶೆಟ್ಟಿ

ಒಕ್ಕೂಟದ ನಿರ್ದೇಶಕ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷ ಹಾಗೂ ಉದ್ಯಮಿ ರಾಜೇಂದ್ರ ವಿ. ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೇಂದ್ರ ಶೆಟ್ಟಿ, ತಾವು ಬಡತನದಲ್ಲಿ ಹುಟ್ಟಿದ್ದು, ಬಡತನದ ನೋವು ಏನೆಂಬುದನ್ನು ಅರಿತಿದ್ದೇನೆ ಎಂದರು. ಐಕಳ ಹರೀಶ್ ಶೆಟ್ಟಿ ಅವರ ಕನಸಿನ ಯೋಜನೆಯಾಗಿ ಮೂಲ್ಕಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಸಭಾಭವನ ನಿರ್ಮಾಣವಾಗುತ್ತಿದೆ. ಐಕಳ ಹರೀಶ್ ಶೆಟ್ಟಿ ಅವರು ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅವರ ಹೆಸರಿನಲ್ಲಿ ತಾನೂ ಸಭಾಭವನ ನಿರ್ಮಿಸುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು.

ನಮ್ಮ ಆಲೋಚನೆಗಳ ಮೂಲಕವೇ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಉದ್ಯೋಗಿಗಳನ್ನು ಪ್ರೀತಿಯಿಂದ ಕಂಡುಕೊಂಡು ಮುನ್ನಡೆದರೆ ಸಂಸ್ಥೆಯೂ, ಸಮಾಜವೂ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಸಮಾಜಪರ ಕಾರ್ಯ ಮುಂದುವರಿಕೆ

ಒಕ್ಕೂಟದ ನಿರ್ದೇಶಕ ಉದಯಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರವಾಗಿ ಸಮಾಜಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಐಕಳ ಹರೀಶ್ ಶೆಟ್ಟಿ ಅವರ ಸಂಘಟನಾ ಶಕ್ತಿ ಹಾಗೂ ಪದಾಧಿಕಾರಿಗಳ ನಿರಂತರ ಪರಿಶ್ರಮದಿಂದಾಗಿ ಒಕ್ಕೂಟ ಹಲವು ಕೋಟಿ ರೂಪಾಯಿಗಳನ್ನು ಬಡವರು ಮತ್ತು ಅಗತ್ಯವಿರುವವರ ವಿವಿಧ ಕಾರ್ಯಗಳಿಗೆ ವಿನಿಯೋಗಿಸಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಎಲ್ಲಾ ಬಂಟರ ಸಂಘಗಳು ಪ್ರತಿವರ್ಷದಂತೆ ನೋಂದಣಿ ಮಾಡಿಕೊಂಡು ಒಕ್ಕೂಟದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು. ಮೂಲ್ಕಿಯಲ್ಲಿ ನಿರ್ಮಾಣವಾಗುತ್ತಿರುವ ಸಭಾಭವನದ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಪೋಷಕ ಸದಸ್ಯ ನವೀನ್ ಚಂದ್ರ ಶೆಟ್ಟಿ ಪಡುಬಿದ್ರೆ ಮಾತನಾಡಿ, ಐಕಳ ಹರೀಶ್ ಶೆಟ್ಟಿ ಅವರು ಕಾಲೇಜು ದಿನಗಳಿಂದಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ತಾವು ಗಮನಿಸಿದ್ದಾಗಿ ಹೇಳಿದರು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಐಕಳ ಹರೀಶ್ ಶೆಟ್ಟಿ ಅವರೊಂದಿಗೆ ಹಲವು ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಸಭೆಯಲ್ಲಿ ನಿರ್ದೇಶಕರಾದ ಶಶಿಧರ ಶೆಟ್ಟಿ ಇನ್ನಂಜೆ, ಇಂಜಿನಿಯರ್ ಗೋಪಾಲ ಭಟ್, ಸುಧಾಕರ ಶೆಟ್ಟಿ, ಸತೀಶ್ಚಂದ್ರ ಶೆಟ್ಟಿ ಅಕ್ಕುಂಜೆ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಯುವ ವಿಭಾಗದ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್, ಸಂಚಾಲಕ ಬಾಲಕೃಷ್ಣ ರೈ ಕೊಲ್ಲಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ಹಿರಿಯಡ್ಕ ಬಂಟರ ಸಂಘದ ನೂತನ ಅಧ್ಯಕ್ಷ ರವೀಂದ್ರನಾಥ ಹೆಗ್ಡೆ, ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಹರ್ಷ ಶೆಟ್ಟಿ, ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ. ಚೇತನ್ ಶೆಟ್ಟಿ ಕೋವಾಡಿ, ಮೂಡುಬಿದ್ರೆ ಯುವ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಬೆಳುವಾಯಿ ಹಾಗೂ ಸುರತ್ಕಲ್ ಬಂಟರ ಸಂಘದ ಯುವ ಸಮಿತಿ ಸಂಚಾಲಕ ಶಿಶಿರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಆಡಳಿತ ಮಂಡಳಿ ಸಭೆಯಲ್ಲಿ ತ್ರೈಮಾಸಿಕ ಲೆಕ್ಕಪತ್ರಗಳ ಮಂಡನೆ, ವರದಿ ವಾಚನ, ಲೆಕ್ಕಪತ್ರಗಳಿಗೆ ಮಂಜೂರಾತಿ ಹಾಗೂ ಫಲಾನುಭವಿಗಳಿಗೆ ನೀಡಿರುವ ಆರ್ಥಿಕ ಸಹಾಯಧನಕ್ಕೆ ಅನುಮೋದನೆ ಪಡೆಯಲಾಯಿತು. ಒಕ್ಕೂಟದ 30ನೇ ವಾರ್ಷಿಕ ಮಹಾಸಭೆಯ ದಿನಾಂಕವನ್ನೂ ನಿಗದಿಪಡಿಸಲಾಯಿತು.

ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿದರು. ಗಿರೀಶ್ ಶೆಟ್ಟಿ ವಂದಿಸಿದರು. ಅನೂಪ್ ಶೆಟ್ಟಿ ಸುರತ್ಕಲ್ ಪ್ರಾರ್ಥನೆ ನೆರವೇರಿಸಿದರು. ಡಾ. ಪ್ರಿಯಾ ಶೆಟ್ಟಿ ಹಾಗೂ ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

Scroll to Top