ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸಿದ ಮೇ 2026ರ ಚಾರ್ಟರ್ಡ್ ಅಕೌಂಟೆನ್ಸಿ (ಸಿ.ಎ.) ಫೈನಲ್ ಪರೀಕ್ಷೆಯಲ್ಲಿ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಕ್ತನ ವಿದ್ಯಾರ್ಥಿನಿ ಶ್ರಾವ್ಯ ಶೆಟ್ಟಿ ಅವರು ಚೊಚ್ಚಲ ಪ್ರಯತ್ನದಲ್ಲೇ ಸಿ.ಎ. ಕೋರ್ಸ್ನ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಸವಾಲಿನ ವೃತ್ತಿಪರ ಪರೀಕ್ಷೆಗಳಲ್ಲಿ ಒಂದಾದ ಸಿ.ಎ. ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿರುವ ಶ್ರಾವ್ಯ ಅವರ ಸಾಧನೆ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆಯಾಗಿದೆ. ಅವರ ನಿರಂತರ ಪರಿಶ್ರಮ, ಸಮರ್ಪಣಾ ಮನೋಭಾವ ಹಾಗೂ ದೃಢ ಸಂಕಲ್ಪವೇ ಈ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದೆ.
ಕುಂದಾಪುರದ ಅಂಪಾರು ನಿವಾಸಿಯಾಗಿರುವ ಶ್ರಾವ್ಯ ಶೆಟ್ಟಿ ಅವರು ಸಂತೋಷ್ ಶೆಟ್ಟಿ ಅವರ ಪುತ್ರಿಯಾಗಿದ್ದಾರೆ. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.
ಅವರ ಈ ಗಮನಾರ್ಹ ಸಾಧನೆಗಾಗಿ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಅವರ ಉಜ್ವಲ ಭವಿಷ್ಯ ಹಾಗೂ ಯಶಸ್ವಿ ವೃತ್ತಿಜೀವನಕ್ಕೆ ಶುಭ ಹಾರೈಸಿದ್ದಾರೆ.
CA Final Pass in First Attempt Dr B B Hegde Colleges Shravya Shettys Achievement


