ಕುಂದಾಪುರ: ಕುಂದಾಪ್ರ ಕನ್ನಡ ಕೇವಲ ಮಾತನಾಡುವ ಭಾಷೆಯಲ್ಲ; ಅದು ನಮ್ಮ ಸಂಸ್ಕೃತಿ, ಜೀವನಶೈಲಿ ಮತ್ತು ಪರಂಪರೆಯ ಪ್ರತಿಬಿಂಬವಾಗಿದೆ. ಆಧುನಿಕ ಶಿಕ್ಷಣದ ಜೊತೆಗೆ ನಮ್ಮ ಮಣ್ಣಿನ ಭಾಷೆಯನ್ನು ಮನೆಮನೆಗಳಲ್ಲಿ ಬಳಸುವ ಮೂಲಕ ಜೀವಂತವಾಗಿರಿಸಬೇಕೆಂದು ಮಾಜಿ ಸಚಿವರು ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಪೋಷಕರಾದ ಕೆ. ಜಯಪ್ರಕಾಶ್ ಹೆಗ್ಡೆ ಕರೆ ನೀಡಿದರು.
ಯಡಾಡಿ-ಮತ್ಯಾಡಿಯ ಸುಜ್ಞಾನ ಪದವಿ ಪೂರ್ವ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕುಂದಾಪ್ರ ಕನ್ನಡ ಭಾಷಿಕ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ಹಳ್ಳಿಯ ಬದುಕು, ಕೃಷಿ ಸಂಸ್ಕೃತಿ ಹಾಗೂ ಹಿರಿಯರ ಅನುಭವಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಮೊಬೈಲ್ ಮತ್ತು ಡಿಜಿಟಲ್ ಜಗತ್ತಿನಲ್ಲಿ ಮಾತ್ರ ಸೀಮಿತವಾಗದೆ, ಮಕ್ಕಳು ಅಜ್ಜ-ಅಜ್ಜಿಯರೊಂದಿಗೆ ಸಮಯ ಕಳೆಯುವ ಮೂಲಕ ಹಳ್ಳಿಯ ಜೀವನ, ಕೃಷಿ ಪದ್ಧತಿ ಹಾಗೂ ಪರಂಪರೆಯ ಜ್ಞಾನವನ್ನು ಅರಿಯಬೇಕು. ಇಲ್ಲವಾದರೆ ನಮ್ಮ ಸಾಂಸ್ಕೃತಿಕ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಸುಜ್ಞಾನ ಶಿಕ್ಷಣ ಸಂಸ್ಥೆಯೇ ಭರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದ ಅವರು, ಕುಂದಾಪ್ರ ಕನ್ನಡ ಕುರಿತಾಗಿ ಪಿಎಚ್‌ಡಿ ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳು ಹಾಗೂ ಪುಸ್ತಕ ರಚನೆಗೆ ಮುಂದಾಗುವ ಪ್ರತಿಭಾವಂತರಿಗೆ ಅಧ್ಯಯನ ಪೀಠದಿಂದ ಆರ್ಥಿಕ ಮತ್ತು ಶೈಕ್ಷಣಿಕ ನೆರವು ನೀಡಲಾಗುವುದು ಎಂದು ಘೋಷಿಸಿದರು.

ಭಾಷೆ ಮತ್ತು ಸಂಸ್ಕೃತಿ ಮರೆಯಬೇಡಿ: ಅಶ್ವಿನಿ ಗೌಡ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟಿ ಹಾಗೂ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ ಮಾತನಾಡಿ, ವ್ಯಕ್ತಿ ಎಲ್ಲೇ ಹೋದರೂ ತನ್ನ ಹುಟ್ಟಿದ ನೆಲ, ಮಾತೃಭಾಷೆ ಮತ್ತು ಸಂಸ್ಕೃತಿಯನ್ನು ಮರೆಯಬಾರದು. ಇಂಗ್ಲಿಷ್ ಮತ್ತು ಹಿಂದಿ ಪ್ರಭಾವದ ನಡುವೆ ಕನ್ನಡವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಮೊಬೈಲ್ ಅನ್ನು ಜ್ಞಾನ ಸಂಪಾದನೆಗೆ ಬಳಸಬೇಕು, ಅದರ ದಾಸರಾಗಬಾರದು. ಉತ್ತಮ ಸ್ನೇಹ ಬಳಗವನ್ನು ಆರಿಸಿಕೊಳ್ಳಬೇಕು ಹಾಗೂ ಸಮಾಜಸೇವೆಗೆ ದೊಡ್ಡ ಹುದ್ದೆ ಅಗತ್ಯವಿಲ್ಲ, ಮಾನವೀಯತೆ ಇದ್ದರೆ ಸಾಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಮಾಜಸೇವೆಗೆ ತನ್ನ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿರುವ ಸುಜ್ಞಾನ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಅವರು ಶ್ಲಾಘಿಸಿದರು.
ಮನೆಗಳಿಂದಲೇ ಆರಂಭವಾಗಲಿ ಭಾಷಾ ಪ್ರೇಮ: ಮೊಳಹಳ್ಳಿ ದಿನೇಶ್ ಹೆಗ್ಡೆ
ಜಯರತ್ನ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಹಾಗೂ ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾತನಾಡಿ, ಕುಂದಾಪ್ರ ಕನ್ನಡ ಉಳಿಯಬೇಕಾದರೆ ಮನೆಯಲ್ಲೇ ಮಕ್ಕಳೊಂದಿಗೆ ಆ ಭಾಷೆಯಲ್ಲಿ ಮಾತನಾಡುವ ಅಭ್ಯಾಸ ಬೆಳೆಸಬೇಕು. ಇಂಗ್ಲಿಷ್ ಮಾಧ್ಯಮದ ಪ್ರಭಾವದಿಂದ ಮಕ್ಕಳು ಮಾತೃಭಾಷೆಯಿಂದ ದೂರವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಭಾಷಾ ಪ್ರೇಮ ಮನೆಗಳಿಂದಲೇ ಆರಂಭವಾಗಬೇಕು ಎಂದು ಹೇಳಿದರು.
ಗಣ್ಯರ ಸಮ್ಮುಖದಲ್ಲಿ ಸನ್ಮಾನ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜ್ಞಾನ ಎಜುಕೇಶನ್ ಟ್ರಸ್ಟ್ (ರಿ.) ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ವಹಿಸಿದ್ದರು. ಸಂಸ್ಥೆಯ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ರಾಜು ಮೊಗವೀರ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕ ಪ್ರೊ. ನಾಗಪ್ಪಗೌಡ ಆರ್. ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅರುಣ್ ಕುಮಾರ್ ಹೆಗ್ಡೆ, ಸಬ್ಲಾಡಿ ಮಂಜಯ್ಯ ಶೆಟ್ಟಿ, ವಿಕಾಸ್ ಹೆಗ್ಡೆ, ಚಿಟ್ಟೆಬೈಲು ಜಗನ್ನಾಥ ಶೆಟ್ಟಿ, ಕೆ.ಸಿ. ರಾಜೇಶ್, ಪಡುಕೆರೆ ಉದಯಕುಮಾರ್ ಶೆಟ್ಟಿ, ಜುಡಿತ್ ಮೆಂಡೋನ್ಸಾ ಹಾಗೂ ಡಾ. ರೇಖಾ ಬನ್ನಾಡಿ ಉಪಸ್ಥಿತರಿದ್ದರು.
ಶಿಕ್ಷಕ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ರಂಜನ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು. ನೂರಾರು ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ನಡೆದ ಈ ಕಲಾ ಮತ್ತು ಸಾಂಸ್ಕೃತಿಕ ಹಬ್ಬವು ಕುಂದಾಪ್ರ ಕನ್ನಡದ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.


