ಮುಂಬಯಿ: ಮಕ್ಕಳು ಬಂಟರ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತೀ ಬಾರಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಪಾಲಕರು ಅವರಿಗೆ ಶಿಕ್ಷಣದ ಜೊತೆಗೆ ಸಂಘದ ಚಟುವಟಿಕೆಗಳು, ಸೇವಾ ಕಾರ್ಯಗಳು ಹಾಗೂ ಸಂಘದ ಉದ್ದೇಶಗಳ ಬಗ್ಗೆ ಅರಿವು ಮೂಡಿಸಬೇಕು. ಇದರಿಂದ ಭವಿಷ್ಯದಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಸಮಾಜ ಸೇವೆಗೆ ಕೈಜೋಡಿಸಲು ಸಾಧ್ಯವಾಗುತ್ತದೆ ಎಂದು ಶತಮಾನದತ್ತ ಸಾಗುತ್ತಿರುವ ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಹೇಳಿದರು.
ಜೂನ್ 28ರಂದು ನಾಲಾಸೋಪಾರ ಪಶ್ಚಿಮದ ಗ್ಯಾಲಕ್ಸಿ ಹೋಟೆಲ್ ಸಭಾಂಗಣದಲ್ಲಿ ಬಂಟರ ಸಂಘ ಮುಂಬಯಿಯ ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು, ವಿಧವೆಯರು ಹಾಗೂ ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಪ್ರತಿಯೊಂದು ಪ್ರಾದೇಶಿಕ ಸಮಿತಿಯೂ ಕನಿಷ್ಠ 100 ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆಯುವ ಯೋಜನೆಯಲ್ಲಿ ಸೇರಿಸಿಕೊಂಡರೆ, ಮುಂದಿನ ಹತ್ತು ವರ್ಷಗಳಲ್ಲಿ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೆರವು ನೀಡಿದಂತಾಗುತ್ತದೆ. ಸಂಘದ ಹಿರಿಯರು ಶಿಕ್ಷಣಕ್ಕೆ ನೀಡಿದ ಆದ್ಯತೆ ಇಂದು ಸಮಾಜದ ಅಭಿವೃದ್ಧಿಗೆ ಕಾರಣವಾಗಿದ್ದು, ಅವರ ನಿಸ್ವಾರ್ಥ ಸೇವೆಯಿಂದಲೇ ಸಂಘ ಉತ್ತಮ ಸ್ಥಾನಮಾನ ಗಳಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಹಾಗೂ ಅವರ ತಂಡವು ಪ್ರಾದೇಶಿಕ ಸಮಿತಿ ಮತ್ತು ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಗೆ ₹22 ಲಕ್ಷಕ್ಕೂ ಅಧಿಕ ಮೊತ್ತದ ನಿಧಿಯ ಚೆಕ್ ಹಸ್ತಾಂತರಿಸಿತು.
ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಜಯ ಅಶೋಕ ಶೆಟ್ಟಿ ಮಾತನಾಡಿ, ಸಮಿತಿಯಲ್ಲಿ ಸೇವೆ ಸಲ್ಲಿಸುವುದರಿಂದ ದೊರೆತ ತೃಪ್ತಿ ಅಪಾರವಾಗಿದೆ. ಆರೋಗ್ಯದ ಬಗ್ಗೆ ಸಮಾಜದವರು ಹೆಚ್ಚಿನ ಕಾಳಜಿ ವಹಿಸುವುದರ ಜೊತೆಗೆ ಅಗತ್ಯವಿದ್ದಾಗ ಸಂಘದ ನೆರವು ಪಡೆಯಲು ಹಿಂಜರಿಯಬಾರದು ಎಂದು ಕರೆ ನೀಡಿದರು.
ಹಿರಿಯ ನಾಗರಿಕರಾದ ಶ್ರೀಮತಿ ಸುನಂದ ರತ್ನಾಕರ ಶೆಟ್ಟಿ ದಂಪತಿ ಹಾಗೂ ಶ್ರೀಮತಿ ಲಲಿತ ಜಯಕರ ಶೆಟ್ಟಿ ಅವರನ್ನು ಸಂಘದ ಹಿರಿಯ ನಾಗರಿಕ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ ಅವರು ಸಂಜೀವಿನಿ ಟ್ರಸ್ಟ್ ಯೋಜನೆಯ ಕುರಿತು ಮಾಹಿತಿ ನೀಡಿ, ಈ ಯೋಜನೆಯ ಮೂಲಕ ಸಮಾಜದ ನೂರಾರು ವಿದ್ಯಾರ್ಥಿಗಳು ಈಗಾಗಲೇ ಪ್ರಯೋಜನ ಪಡೆದಿದ್ದಾರೆ. ತರಬೇತಿ ಪೂರ್ಣಗೊಳಿಸಿದ ಬಳಿಕ ಟಾಟಾ ಸಂಸ್ಥೆಯ ಸಹಯೋಗದಲ್ಲಿ ಉದ್ಯೋಗಾವಕಾಶಗಳೂ ಲಭ್ಯವಾಗುತ್ತವೆ. ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನೆರವು ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ ಕೊಡ್ಲಾಡಿ ಸ್ವಾಗತಿಸಿ ಮಾತನಾಡಿ, ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಯುವಜನತೆ ಮತ್ತು ಮಕ್ಕಳು ಸಂಘದ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಸಮಾಜಸೇವೆಯ ವ್ಯಾಪ್ತಿ ಇನ್ನಷ್ಟು ವಿಸ್ತರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ವೃತ್ತಿಪರ ಶಿಕ್ಷಣದಲ್ಲಿ ಯಶಸ್ಸು ಪಡೆದ ಏಳು ವಿದ್ಯಾರ್ಥಿಗಳು ಹಾಗೂ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು. ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಗೆ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ₹1 ಲಕ್ಷ ಪ್ರೋತ್ಸಾಹಧನ ನೀಡಿ ಅಭಿನಂದಿಸಿದರು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಗುರ್ಮೆ, ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ವಿಜಯ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅರುಣಾ ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷೆ ವರ್ಷಾ ಎಸ್. ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಿವಾಕರ ಶೆಟ್ಟಿ ಇಂದ್ರಾಳಿ ಹಾಗೂ ಜಯ ಅಶೋಕ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದಿಂದ ಭಜನೆ, ಮಕ್ಕಳಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು. ವಿಜಯ ಶೆಟ್ಟಿ ಕುತ್ತೆತ್ತೂರು ಕಾರ್ಯಕ್ರಮ ನಿರೂಪಿಸಿ, ಜಗನ್ನಾಥ ಶೆಟ್ಟಿ ಪಳ್ಳಿ ವಂದನಾರ್ಪಣೆ ಸಲ್ಲಿಸಿದರು. ಶಶಿಧರ ಶೆಟ್ಟಿ ಇನ್ನಂಜೆ ಅವರ ವತಿಯಿಂದ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
Introduce the heritage of the Sangh to children and instill a spirit of service Praveen Bhoja Shetty


