Sampath shetty krishna prasad foundation seva sankalpa 1

ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ವತಿಯಿಂದ ₹93.64 ಲಕ್ಷ ಮೌಲ್ಯದ ನೆರವು ವಿತರಣೆ

ಕುಂದಾಪುರ: ಪ್ರತಿಭೆ, ಸಾಮರ್ಥ್ಯ ಹಾಗೂ ಕಲಿಯುವ ಆಸಕ್ತಿ ಹೊಂದಿರುವವರಿಗೆ ಇಂದಿನ ಸಮಾಜದಲ್ಲಿ ಆರ್ಥಿಕ ಹಿನ್ನೆಲೆ ಅಡ್ಡಿಯಾಗುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಉತ್ತಮ ಕೆಲಸ ಮಾಡುವವರನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೋಟೇಶ್ವರದ ಯುವ ಮೆರಿಡಿಯನ್ ಗ್ರ್ಯಾಂಮಿ ಬಾಲ್‌ರೂಮ್‌ನಲ್ಲಿ ಭಾನುವಾರ ನಡೆದ ‘ಸೇವಾ ಸಂಕಲ್ಪ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಹಾಗೂ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್, ವಂಡಾರು-ಬ್ರಹ್ಮಾವರ ವತಿಯಿಂದ ಆಯೋಜಿಸಲಾಗಿತ್ತು.

ಸಮಾಜದ ಅಭಿವೃದ್ಧಿಗೆ ದೂರದೃಷ್ಟಿಯ ನಾಯಕತ್ವ ಅಗತ್ಯವಾಗಿದ್ದು, ಟಿ.ಎ. ಪೈ, ಶ್ರೀನಿವಾಸ ಮಲ್ಯ ಹಾಗೂ ಜಾರ್ಜ್ ಫರ್ನಾಂಡಿಸ್ ಅವರಂತಹ ನಾಯಕರು ರೂಪಿಸಿದ ದಾರಿಯ ಫಲವಾಗಿ ಇಂದು ಕರಾವಳಿ ಭಾಗವು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಪ್ರತಿಭಾವಂತರ ಸಂಖ್ಯೆ ಹೆಚ್ಚಿದ್ದು, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಜನರು ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಚೇರ್ಮನ್ ಸಂಪತ್ ಶೆಟ್ಟಿ ಅವರು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಂಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡುವುದರ ಜೊತೆಗೆ ನಾಲ್ಕು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಕಲ್ಪಿಸಿರುವುದು ಅಭಿನಂದನೀಯ ಎಂದು ಸಂಸದರು ಪ್ರಶಂಸಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸರ್ಕಾರ ಇನ್ನಷ್ಟು ಆದ್ಯತೆ ನೀಡಬೇಕಾಗಿದೆ. ಈ ಸಂದರ್ಭದಲ್ಲಿ ಸಂಪತ್ ಶೆಟ್ಟಿ ಅವರು ತಮ್ಮ ಆದಾಯದ ಒಂದು ಭಾಗವನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು, ವಿದ್ಯಾರ್ಥಿವೇತನ, ದತ್ತು ಸ್ವೀಕಾರ ಸೇರಿದಂತೆ ಹಲವು ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಮಾದರಿಯ ಕಾರ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಪತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದ ಮೂಲಕ ಸಮಾಜದಲ್ಲಿ ಶಾಶ್ವತ ಬದಲಾವಣೆ ತರಲು ಸಾಧ್ಯ. ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಕನಸುಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಸೇವಾ ಸಂಕಲ್ಪ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಣಿಗೆಯ ಬಹುಪಾಲು ಮೊತ್ತವನ್ನು ಬಡ ಮಕ್ಕಳ ಶಿಕ್ಷಣ ಹಾಗೂ ಅವರ ಭವಿಷ್ಯ ರೂಪಿಸುವ ಯೋಜನೆಗಳಿಗೆ ಬಳಸಲಾಗುತ್ತಿದೆ. ನೆರವು ಪಡೆದ ವಿದ್ಯಾರ್ಥಿಗಳಲ್ಲಿ ಕೆಲವರು ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಬೆಳೆಯಬೇಕು ಎಂಬುದು ತಮ್ಮ ಆಶಯ ಎಂದು ತಿಳಿಸಿದರು.

Also Read: ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್‌ನಿಂದ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಈ ಸಂದರ್ಭದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ನೆರವು, ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿಗೆ 50 ಕಂಪ್ಯೂಟರ್‌ಗಳ ವಿತರಣೆ, ಆರು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌ಗಳ ವಿತರಣೆ, ಬಡ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ವೈದ್ಯಕೀಯ ನೆರವಿಗಾಗಿ ವಿವಿಧ ಅನುದಾನ, 2025-26ನೇ ಸಾಲಿನ ಐದು ವಿದ್ಯಾರ್ಥಿಗಳ ಮತ್ತು 2026-27ನೇ ಸಾಲಿನ 14 ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿದ್ಯಾರ್ಥಿವೇತನ ವಿತರಣೆ, ಅತಿಥಿ ಶಿಕ್ಷಕರ ವೇತನ ಪಾವತಿ, ವೈದ್ಯಕೀಯ ಸಹಾಯಧನ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ಮತ್ತು ಕೊಡೆಗಳ ವಿತರಣೆ ಸೇರಿದಂತೆ ಒಟ್ಟು ₹93.64 ಲಕ್ಷ ಮೌಲ್ಯದ ನೆರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಡಾ. ಕೊತ್ತಾಡಿ ಉಮೇಶ್ ಶೆಟ್ಟಿ, ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್, ಯುವ ಮೆರಿಡಿಯನ್ ಆಡಳಿತ ನಿರ್ದೇಶಕರಾದ ಬಿ. ಉದಯಕುಮಾರ್ ಶೆಟ್ಟಿ ಮತ್ತು ಬಿ. ವಿನಯಕುಮಾರ್ ಶೆಟ್ಟಿ, ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಪತ್ರಕರ್ತ ರಾಜೇಶ್ ಕೆ.ಸಿ. ಹಾಗೂ ಸೋನಾಲಿ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಎಳ್ಳಂಪಳ್ಳಿ ಸಂತೋಷ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶ್ರೀನಿವಾಸ ಶೆಟ್ಟಿ ವಂದಿಸಿದರು.

Leave a Comment

Your email address will not be published. Required fields are marked *

Scroll to Top