ಉಡುಪಿ: ಇಂದಿನ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು, ಪದವಿ, ಅಂಕ ಹಾಗೂ ಪ್ರಮಾಣಪತ್ರಗಳ ಜೊತೆಗೆ ಅಭ್ಯರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಜೊತೆಗೆ ತಾವು ನಡೆದು ಬಂದ ದಾರಿಯ ಸ್ಮರಣೆ ಹಾಗೂ ಗುರು-ಹಿರಿಯರ ಆಶೀರ್ವಾದವನ್ನು ಮರೆಯದೆ ಸಾಗಿದರೆ ಯಶಸ್ಸು ಖಚಿತ ಎಂದು ನಿಟ್ಟೆ ತಂತ್ರಜ್ಞಾನ ಸಂಸ್ಥೆಯ ಸಮಲೋಚನೆ, ಕಲ್ಯಾಣ, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಭರತ್ ಜಿ. ಕುಮಾರ್ ಹೇಳಿದರು.
ಅವರು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಣಿಪಾಲದ ಕುಂತಲನಗರದಲ್ಲಿರುವ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ನ ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಲಾದ ಉಚಿತ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿಯ 21ನೇ ಬ್ಯಾಚ್ ಅಭ್ಯರ್ಥಿಗಳಿಗೆ ಮೈನ್ಸ್ ಕಂಪ್ಯೂಟರ್ ಸಂಸ್ಥೆಯ ಪ್ರಮಾಣಪತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಟ್ರಸ್ಟ್ ವತಿಯಿಂದ ಇದುವರೆಗೆ 420ಕ್ಕೂ ಹೆಚ್ಚು ಯುವಕರು ಹಾಗೂ ಮಹಿಳೆಯರಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗಿದೆ. ಅಲ್ಲದೆ, ಉದ್ಯೋಗ ಮೇಳಗಳ ಮೂಲಕ ಸುಮಾರು 3,500 ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಈ ವರ್ಷದ ಉದ್ಯೋಗ ಮೇಳವು ಆಗಸ್ಟ್ 9ರಂದು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇದರ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.

ಉಡುಪಿ ಉಜ್ವಲ್ ಡೆವಲಪರ್ಸ್ನ ಅಜಯ್ ಪಿ. ಶೆಟ್ಟಿ ಅವರು ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಡಾ. ಎಚ್.ಬಿ. ಶೆಟ್ಟಿ, ಉದ್ಯಮಿ ಮೋಹನ್ ಶೆಟ್ಟಿ ದೆಂದೂರುಕಟ್ಟೆ, ಪ್ರೋಗ್ರಾಂ ಕೋ-ಆರ್ಡಿನೇಟರ್ ಪದ್ಮನಾಭ ಹೆಗ್ಡೆ, ಟ್ರಸ್ಟಿಗಳಾದ ರಮೇಶ್ ಶೆಟ್ಟಿ, ದಯಾನಂದ ಶೆಟ್ಟಿ, ಹರೀಂದ್ರ ಹೆಗ್ಡೆ, ರಮೇಶ್ ಶೆಟ್ಟಿ, ಮೈನ್ಸ್ ಕಂಪ್ಯೂಟರ್ ಸಂಸ್ಥೆಯ ಪ್ರಾಂಶುಪಾಲ ರವಿ ಕೋಟ್ಯಾನ್ ಹಾಗೂ ತರಬೇತುದಾರ ಉಪನ್ಯಾಸಕ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅವರು ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಸಂಘದ ಕಾರ್ಯದರ್ಶಿ ಹಾಗೂ ಟ್ರಸ್ಟ್ ಕೋಶಾಧಿಕಾರಿ ವಿಜಿತ್ ಶೆಟ್ಟಿ ವಂದಿಸಿದರು. ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಸುಧೀರ್ ರಾಜ್ ಕಾರ್ಯಕ್ರಮ ನಿರೂಪಿಸಿದರು.


