rayara aradhana mahotsava mantralaya 75000 holige vitarane

ರಾಯರ ಆರಾಧನಾ ಮಹೋತ್ಸವಕ್ಕೆ ಭಕ್ತಿಸೇವೆಯ ಸಿಹಿಸ್ಪರ್ಶ: ಮಂತ್ರಾಲಯದಲ್ಲಿ ಸುಮಾರು 75 ಸಾವಿರ ಹೋಳಿಗೆ ವಿತರಣೆ

ಬೆಂಗಳೂರು: ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಆ. 29, 30 ಮತ್ತು 31ರಂದು ಮಂತ್ರಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ರಾಯರ ಮಧ್ಯಾರಾಧನಾ ದಿನವಾದ ಆ. 30ರಂದು ಮಂತ್ರಾಲಯಕ್ಕೆ ಆಗಮಿಸುವ ಭಕ್ತರಿಗೆ ವಿಶೇಷ ಪ್ರಸಾದವಾಗಿ ಹೋಳಿಗೆ ವಿತರಿಸುವ ಸೇವೆಯನ್ನು ಬೆಂಗಳೂರಿನ ಹೋಳಿಗೆ ಮನೆಯ ಜಯರಾಮ್ ಶೆಟ್ಟಿ ಹೆನ್ನಾಬೈಲ್, ಪ್ರಕಾಶ್ ಶೆಟ್ಟಿ ಎಡಮೊಗೆ ಹಾಗೂ ಸ್ನೇಹಿತರು ಆಯೋಜಿಸಿದ್ದಾರೆ.

ಪರಮಪೂಜ್ಯ ಶ್ರೀ ಶ್ರೀ ಸುಬುದೇಂದ್ರ ತೀರ್ಥರ ಆಶೀರ್ವಾದ ಹಾಗೂ ಅನುಗ್ರಹದೊಂದಿಗೆ ಈ ವಿಶೇಷ ಸೇವೆ ನಡೆಯಲಿದೆ. ಮಂತ್ರಾಲಯಕ್ಕೆ ಆಗಮಿಸುವ ಸಮಸ್ತ ಭಕ್ತರಿಗೆ ಪ್ರಸಾದ ವಿತರಿಸುವ ಉದ್ದೇಶದಿಂದ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

75 ಸಾವಿರ ಹೋಳಿಗೆ ತಯಾರಿ

ಹೋಳಿಗೆ ಮನೆಯ ವತಿಯಿಂದ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಅನನ್ಯ ಸೇವೆಗಾಗಿ ಸುಮಾರು 75,000 ಹೋಳಿಗೆಗಳನ್ನು ಸ್ವಂತ ವೆಚ್ಚದಲ್ಲಿ ತಯಾರಿಸಲಾಗುತ್ತಿದೆ. ಮಧ್ಯಾರಾಧನಾ ದಿನದಂದು ಮಂತ್ರಾಲಯಕ್ಕೆ ಆಗಮಿಸುವ ಭಕ್ತರಿಗೆ ಹೋಳಿಗೆ ಪ್ರಸಾದವಾಗಿ ವಿತರಿಸಲಾಗುವುದು.

ಈ ಸೇವೆಯ ಕುರಿತು ಮಾತನಾಡಿದ ಸೇವಾಕರ್ತರಲ್ಲಿ ಒಬ್ಬರಾದ ಜಯರಾಮ್ ಶೆಟ್ಟಿ ಹೆನ್ನಾಬೈಲ್, ತಾವು ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಪೂಜ್ಯ ಶ್ರೀಗಳ ಭೇಟಿಯಾಗಿತ್ತು. ಆ ಸಂದರ್ಭದಲ್ಲಿ ಪ್ರಸಾದ ವಿತರಣಾ ಸೇವೆಯ ಕುರಿತು ಚರ್ಚೆ ನಡೆದಿದ್ದು, ಅದರಂತೆ ಇದೀಗ ಈ ಸೇವೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಯರ ಭಕ್ತರಿಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ. ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗುವ ಉದ್ದೇಶದಿಂದ ಈ ಸೇವೆ ಆಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಆಗಮಿಸುವ ರಾಯರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ವಿಶೇಷ ಸೇವೆಯಲ್ಲಿ ಪಾಲ್ಗೊಂಡು ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *

Scroll to Top