ಕುಂದಾಪುರ: ನಾಯಕತ್ವ ಎಂದರೆ ಕೇವಲ ಅಧಿಕಾರ ಚಲಾಯಿಸುವುದಲ್ಲ; ಅದು ಜವಾಬ್ದಾರಿ, ಶಿಸ್ತು, ಬದ್ಧತೆ ಹಾಗೂ ಇತರರಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗುವ ಗುಣ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಕ್ ಅಭಿಪ್ರಾಯಪಟ್ಟರು.
ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್ನಲ್ಲಿ ಬುಧವಾರ ನಡೆದ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ನಾಯಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಶಿಸ್ತು ಮತ್ತು ಬದ್ಧತೆ ಅತ್ಯಗತ್ಯ. ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ಅವಕಾಶಗಳು ದೊರೆಯುವುದು ಭಾಗ್ಯ. ತಂಡದೊಂದಿಗೆ ಬೆರೆತು ಎಲ್ಲರನ್ನೂ ಮುನ್ನಡೆಸುವ ವ್ಯಕ್ತಿಯೇ ನಿಜವಾದ ನಾಯಕ ಎಂದು ಅವರು ಹೇಳಿದರು.
ಮಹಾತ್ಮ ಗಾಂಧೀಜಿಯವರ “ಎಲ್ಲಾ ನ್ಯಾಯಾಲಯಗಳಿಗಿಂತ ಆತ್ಮಸಾಕ್ಷಿಯ ನ್ಯಾಯಾಲಯವೇ ದೊಡ್ಡದು” ಎಂಬ ಮಾತನ್ನು ಉಲ್ಲೇಖಿಸಿದ ಅವರು, ಯಾವುದೇ ತಪ್ಪು ಮಾಡುವ ಮುನ್ನ ನಮ್ಮನ್ನು ಎಚ್ಚರಿಸುವುದು ಆತ್ಮಸಾಕ್ಷಿಯೇ ಆಗಿರುವುದರಿಂದ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ರಾವ್ ಮಾತನಾಡಿ, ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸುವುದು ಸುಲಭವಲ್ಲ. ಪ್ರಾಮಾಣಿಕತೆ, ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಮಾತ್ರ ಉತ್ತಮ ನಾಯಕತ್ವ ಸಾಧ್ಯ ಎಂದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಜಯಚಂದ್ರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬ್ಯಾಡ್ಜ್ನ ಮಹತ್ವವನ್ನು ಅರಿತುಕೊಳ್ಳಬೇಕು. ಶಾಲೆಯು ನಿಮ್ಮ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿಯನ್ನು ನೀಡಿದ್ದು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಕನಸುಗಳ ಕುರಿತ ಸಂದೇಶವನ್ನು ಉಲ್ಲೇಖಿಸಿ, ಜೀವನದಲ್ಲಿ ದೊಡ್ಡ ಗುರಿಗಳನ್ನು ಹೊಂದುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ನಾಯಕನಾಗುವ ಮೊದಲು ಪ್ರತಿಯೊಬ್ಬರೂ ಶಿಸ್ತು, ಬದ್ಧತೆ ಮತ್ತು ಶ್ರದ್ಧೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದೇ ಗುಣಗಳು ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದರು.
ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ದೊರೆತಿರುವ ಈ ನಾಯಕತ್ವದ ಅವಕಾಶ ಮುಂದಿನ ಜೀವನದಲ್ಲಿ ಸಹಕಾರಿಯಾಗಲಿದೆ. ನಾಯಕತ್ವ ಎಂದರೆ ಆದೇಶ ನೀಡುವುದಲ್ಲ; ಇತರರಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗುವುದೇ ನಿಜವಾದ ನಾಯಕತ್ವ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ರಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ವಿವಿಧ ಕ್ಷೇತ್ರಗಳ ಸಾಧಕರನ್ನು ಆಹ್ವಾನಿಸಲಾಗುತ್ತಿದೆ. ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ವ್ಯಕ್ತಿಯೇ ಯಶಸ್ವಿ ನಾಯಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಮುಖ್ಯ ಅತಿಥಿಗಳಿಂದ ಬ್ಯಾಡ್ಜ್ಗಳನ್ನು ಸ್ವೀಕರಿಸಿ ಪದಗ್ರಹಣ ಮಾಡಿದರು. ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಪ್ರಾಂಶುಪಾಲ ಪ್ರದೀಪ್ ಅವರು ಪ್ರತಿಜ್ಞಾವಿಧಿ ಬೋಧಿಸಿ, ವಿದ್ಯಾರ್ಥಿ ನಾಯಕಿ ಲಾಸ್ಯ ಮಧ್ಯಸ್ಥ ಹಾಗೂ ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್ನ ವಿದ್ಯಾರ್ಥಿ ನಾಯಕಿ ಯಶಿಕಾ ಅವರಿಗೆ ಶುಭ ಹಾರೈಸಿದರು.
ಸುಜ್ಞಾನ ನ್ಯಾಷನಲ್ ಕಾಲೇಜು, ಬಾರ್ಕೂರಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್ನ ಪ್ರಾಂಶುಪಾಲೆ ಅನಿತಾ ಕುಮಾರಿ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಸ್ಪೂರ್ತಿ ಎ. ವಂದಿಸಿದರು.
ಮಗನ ಸಾಧನೆಗೆ ಪ್ರೋತ್ಸಾಹಿಸಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಗೆ ಧನ್ಯವಾದ ತಿಳಿಸಿದ ನ್ಯಾಯಾಧೀಶರು
ಕಾರ್ಯಕ್ರಮವೊಂದನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಂ ಹುಸೇನ್ ಶೇಕ್ ಅವರು, ಸುಜ್ಞಾನ ಸಂಸ್ಥೆಯೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಂಡರು.
“ಕಳೆದ ನಾಲ್ಕೈದು ವರ್ಷಗಳಿಂದ ನಾನು ಸುಜ್ಞಾನ ವಿದ್ಯಾಸಂಸ್ಥೆಯನ್ನು ಅತ್ಯಂತ ಹತ್ತಿರದಿಂದ ಗಮನಿಸಿದ್ದೇನೆ. ನನ್ನ ಮಗನ ಜೀವನದಲ್ಲಿ ಶಿಸ್ತು, ಸಂಸ್ಕಾರ ಮತ್ತು ಆತ್ಮವಿಶ್ವಾಸ ಮೂಡಿಸಲು ಇಲ್ಲಿನ ಆಡಳಿತಮಂಡಳಿ, ಉಪನ್ಯಾಸಕರು ನೀಡಿದ ಮಾರ್ಗದರ್ಶನ ಅತೀವ ಸಂತೋಷ ತಂದಿದೆ. ನನ್ನ ಮಗ NEET ಪರೀಕ್ಷೆಯಲ್ಲಿ 720ಕ್ಕೆ 600 ಅಂಕ ಗಳಿಸಿ, ಮೆಡಿಕಲ್ ಸೀಟು ಪಡೆಯಲು ಅರ್ಹತೆ ಗಳಿಸಿದ್ದಾನೆ.ಆತ NEET ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಸಂಸ್ಥೆಯು ನೀಡಿದ ಬೆಂಬಲ, ಅತ್ಯುತ್ತಮ ತರಬೇತಿ, ಕ್ರ್ಯಾಷ್ ಕೋರ್ಸ್ ಹಾಗೂ ಮಾಕ್ ಟೆಸ್ಟ್ ಗಳ ಪರಿಣಾಮವಾಗಿಯೇ ಇಷ್ಟೊಂದು ಉತ್ತಮ ಅಂಕ ಗಳಿಸಿ ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಯಿತು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಸಂಸ್ಥೆ ಬದ್ಧತೆಯಿಂದ ಶ್ರಮಿಸುತ್ತಿದೆ. ಈ ಬೆಂಬಲಕ್ಕಾಗಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಮಸ್ತ ಉಪನ್ಯಾಸಕ ವೃಂದಕ್ಕೆ ನಾನು ಚಿರಋಣಿಯಾಗಿದ್ದೇನೆ” ಎಂದು ನ್ಯಾಯಾಧೀಶರು ಆಡಳಿತ ಮಂಡಳಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.


