ಬೆಂಗಳೂರು: ಇಂದಿನ ವೇಗದ ಜೀವನಶೈಲಿಯಲ್ಲಿ ಅಪರೂಪವಾಗುತ್ತಿರುವ ಪೂರ್ಣರಾತ್ರಿ ತಾಳಮದ್ದಳೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಸಾಕ್ಷಿಯಾಗಲಿದ್ದು, ಯಕ್ಷಗಾನಾಭಿಮಾನಿಗಳಿಗೆ ವಿಶಿಷ್ಟ ಶ್ರವಣಾನುಭವ ನೀಡಲಿದೆ. ನಾಗರಾಜ್ ಶೆಟ್ಟಿ ನೈಕಂಬ್ಳಿ ಅವರ ಸಂಯೋಜನೆಯಲ್ಲಿ ಹಾಗೂ ಬ್ರಾಹ್ಮಿ ಕ್ಯಾಟರರ್ಸ್ ಪ್ರಸ್ತುತಿಯಲ್ಲಿ ನಡೆಯುತ್ತಿರುವ ‘ಯಕ್ಷಸಂಕ್ರಾಂತಿ’ ಕಾರ್ಯಕ್ರಮದ ಮೂರನೇ ವರ್ಷದ ಸಂಭ್ರಮ ಜುಲೈ 25ರಂದು ಶನಿವಾರ ರಾತ್ರಿ 10 ಗಂಟೆಯಿಂದ ಪ್ರಾರಂಭವಾಗಿ ಬೆಳಗಿನವರೆಗೆ ನಡೆಯಲಿದೆ.
ಇತ್ತೀಚಿನ ದಿನಗಳಲ್ಲಿ ಸಮಯದ ಮಿತಿಯೊಳಗೆ ನಡೆಯುವ ತಾಳಮದ್ದಳೆಗಳ ನಡುವೆ, ಇಡೀ ರಾತ್ರಿ ನಡೆಯುವ ಅರ್ಥವೈಭವವನ್ನು ಕಲಾರಸಿಕರಿಗೆ ಪರಿಚಯಿಸುತ್ತಿರುವ ‘ಯಕ್ಷಸಂಕ್ರಾಂತಿ’ ಈಗಾಗಲೇ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದೆ. ರಾಜ್ಯದ ವಿವಿಧ ಭಾಗಗಳಿಂದ ಯಕ್ಷಗಾನ ಪ್ರೇಮಿಗಳು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಇದು ತಾಳಮದ್ದಳೆ ಅಭಿಮಾನಿಗಳ ವಾರ್ಷಿಕ ಸಾಂಸ್ಕೃತಿಕ ಹಬ್ಬವಾಗಿ ರೂಪುಗೊಂಡಿದೆ.
ಈ ಬಾರಿ ಮೊದಲ ಪ್ರಸಂಗವಾಗಿ ಪಾರ್ತಿಸುಬ್ಬ ವಿರಚಿತ ‘ವಾಲಿವಧೆ’ ಹಾಗೂ ಎರಡನೇ ಪ್ರಸಂಗವಾಗಿ ಡಿ.ಎಸ್. ಶ್ರೀಧರ ರಚನೆಯ ‘ಭೃಗುಶಾಪ’ ಪ್ರದರ್ಶನಗೊಳ್ಳಲಿವೆ.
ಪ್ರಸಿದ್ಧ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಹಿಲ್ಲೂರು ರಾಮಕೃಷ್ಣ ಹೆಗಡೆ ಅವರ ಭಾಗವತಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ‘ವಾಲಿವಧೆ’ ಪ್ರಸಂಗದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಶ್ರೀರಾಮನಾಗಿ, ಮಧೂರು ವಾಸುದೇವ ರಂಗಾಭಟ್ಟರು ವಾಲಿಯಾಗಿ ಹಾಗೂ ವಿದ್ವಾನ್ ಸಂಕದಗುಂಡಿ ಗಣಪತಿ ಭಟ್ಟರು ಸುಗ್ರೀವನಾಗಿ ಅರ್ಥವೈಭವ ಅನಾವರಣಗೊಳಿಸಲಿದ್ದಾರೆ.
‘ಭೃಗುಶಾಪ’ ಪ್ರಸಂಗದಲ್ಲಿ ಸಂಪಾಜೆ ಜಬ್ಬಾರ್ ಸಮೊರರು ತಮಾಸುರನಾಗಿ, ಗಣೇಶ ಶೆಟ್ಟಿ ಕನ್ನಡಿಕಟ್ಟೆ ದೇವೇಂದ್ರನಾಗಿ, ವಿದ್ವಾನ್ ಸಂಕದಗುಂಡಿ ಗಣಪತಿ ಭಟ್ಟರು ಖ್ಯಾತಿಯಾಗಿ, ಸುನಿಲ್ ಕುಮಾರ್ ಹೊಲಾಡು ಭೃಗುವಾಗಿ, ಸುರೇಶ್ ಶೆಟ್ಟಿ ನಂದ್ರೊಳ್ಳಿ ವಿಷ್ಣುವಾಗಿ ಹಾಗೂ ಮನು ಹಂದಾಡಿ ಬೃಹಸ್ಪತಿಯಾಗಿ ಭಾಗವಹಿಸಲಿದ್ದಾರೆ.
ಮದ್ದಳೆ ವಾದನದಲ್ಲಿ ಎ.ಪಿ. ಪಾಠಕ್, ಅಕ್ಷಯ್ ಆಚಾರ್ಯ, ಶಶಾಂಕ್ ಆಚಾರ್ಯ, ಶ್ರೀನಿವಾಸ ಪ್ರಭು ಹಾಗೂ ಪ್ರಜ್ವಲ್ ಮುಂಡಾಡಿ ಸಹಕರಿಸಲಿದ್ದಾರೆ.
ಇಡೀ ರಾತ್ರಿ ನಡೆಯುವ ಈ ಅಪರೂಪದ ತಾಳಮದ್ದಳೆ ಹಾಗೂ ಅರ್ಥವೈಭವದ ಶ್ರವಣಾನುಭವವನ್ನು ಯಕ್ಷಗಾನಾಭಿಮಾನಿಗಳು ಸದುಪಯೋಗಪಡಿಸಿಕೊಳ್ಳುವಂತೆ ಕಾರ್ಯಕ್ರಮದ ಆಯೋಜಕರಾದ ನಾಗರಾಜ್ ಶೆಟ್ಟಿ ನೈಕಂಬ್ಳಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 97414 74255 ಸಂಪರ್ಕಿಸಬಹುದು.


