ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರಿನ ಹಾಪ್ಕಾಮ್ಸ್ ಪ್ರಧಾನ ವ್ಯವಸ್ಥಾಪಕ (ಜಿಎಂ) ರವಿಶೆಟ್ಟಿ (43) ಅವರು ದುರಂತ ಅಂತ್ಯ ಕಂಡಿದ್ದಾರೆ. ಕಾರಿನಲ್ಲಿದ್ದ ಅವರ ಮೂವರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಮಂಗಳವಾರ ನಸುಕಿನಜಾವ ಕರ್ನೂಲು ಜಿಲ್ಲೆಯ ಮಂತ್ರಾಲಯದ ಬಳಿ ನಡೆದಿದೆ.
ಮಂಗಳೂರಿನಿಂದ ರವಿಶೆಟ್ಟಿ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಕಾರಿನಲ್ಲಿ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದರು. ಮಂಗಳವಾರ ಮುಂಜಾನೆ ಮಂತ್ರಾಲಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಡಿವೈಡರ್ ಗೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಜ್ಜುಗುಜ್ಜಾಗಿದ್ದು, ತೀವ್ರ ರಕ್ತಸ್ರಾವಕ್ಕೊಳಗಾದ ರವಿಶೆಟ್ಟಿ ಅವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಇತರ ಪ್ರಯಾಣಿಕರಾದ ಪ್ರದೀಪ್ ಆಳ್ವ, ಪುರುಷೋತ್ತಮ ಭಂಡಾರಿ ಹಾಗೂ ಸಿಎ ಸುಧೇಶ್ ರೈ ಅವರಿಗೆ ತೀವ್ರ ಗಾಯಗಳಾಗಿವೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ಕಾರಿನಿಂದ ಹೊರತೆಗೆದಿದ್ದಾರೆ. ಬಳಿಕ ಮೂವರನ್ನೂ ಪ್ರಥಮ ಚಿಕಿತ್ಸೆಗಾಗಿ ಎಮ್ಮಿಗನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.


