ಹುಬ್ಬಳ್ಳಿ: ಸಮಾಜದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಬಂಟ ಸಮುದಾಯದ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುವುದಾಗಿ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷ ರಾಜೇಂದ್ರ ವಿ. ಶೆಟ್ಟಿ ತಿಳಿಸಿದ್ದಾರೆ.
ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ‘ಬಂಟರ ಬಾಂಧವ್ಯ’ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ವಿಜಯಾನಂದ ಶೆಟ್ಟಿ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
“ಸಮಾಜದ ಸಾಮಾನ್ಯ ಸದಸ್ಯನಾಗಿ ಆರಂಭಗೊಂಡ ನನ್ನ ಪಯಣ ಇಂದು ಸಂಘದ ಅಧ್ಯಕ್ಷ ಸ್ಥಾನಕ್ಕೆ ತಲುಪಿರುವುದು ನನ್ನ ಭಾಗ್ಯ. ಒಂದು ಕಾಲದಲ್ಲಿ ಸದಸ್ಯತ್ವ ಶುಲ್ಕ ಪಾವತಿಸಲು ಸಾಧ್ಯವಾಗದ ಸಂದರ್ಭದಲ್ಲೂ ಸಮಾಜ ಹಾಗೂ ಸಂಘ ನನ್ನನ್ನು ಬೆಂಬಲಿಸಿ ಬೆಳೆಸಿದೆ. ಇದೀಗ ಅದೇ ಸಮಾಜಕ್ಕೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿ. ಮುಂದಿನ ಎರಡು ವರ್ಷಗಳಲ್ಲಿ ಸಮಾಜದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತೇವೆ” ಎಂದು ಅವರು ಹೇಳಿದರು.
ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘಕ್ಕೆ ಆದಾಯದ ಮೂಲಗಳನ್ನು ಹೆಚ್ಚಿಸುವ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ವಿಜಯಾನಂದ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸತೀಶ್ಚಂದ್ರ ಶೆಟ್ಟಿ ಹಾಗೂ ಸುಗ್ಗಿ ಸುಧಾಕರ ಶೆಟ್ಟಿ ಅವರು ಮಾತನಾಡಿ ನೂತನ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜದ ಮಕ್ಕಳು ಹಾಗೂ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೂತನ ವಧು-ವರರನ್ನು ಹಿರಿಯರು ಗೌರವಿಸಿ ಸನ್ಮಾನಿಸಿದರು. ಜೂನಿಯರ್ ರಾಜ್‌ಕುಮಾರ್, ಜೂನಿಯರ್ ಅಂಬರೀಶ್, ಜೂನಿಯರ್ ವಿಷ್ಣುವರ್ಧನ್ ಹಾಗೂ ಜೂನಿಯರ್ ಕುಮಾರ್ ಸಾನು ಅವರಿಂದ ರಸಮಂಜರಿ ಕಾರ್ಯಕ್ರಮ ಮನರಂಜನೆ ನೀಡಿತು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಸುಭಾಷ್ಚಂದ್ರ ಶೆಟ್ಟಿ, ನೂತನ ಉಪಾಧ್ಯಕ್ಷರಾದ ಸುಧೀರ್ ಶೆಟ್ಟಿ ಮತ್ತು ಶ್ರೀನಿವಾಸ್ ಶೆಟ್ಟಿ, ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಖಜಾಂಚಿ ದಿನೇಶ್ ಶೆಟ್ಟಿ, ಸಹ ಕಾರ್ಯದರ್ಶಿ ಜ್ಯೋತಿ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


