11th Year Patla Sambrama: Dr. Mohan Alva recived with ‘Mahaposhaka’ award

11ನೇ ವರ್ಷದ ಪಟ್ಲ ಸಂಭ್ರಮ: ಡಾ. ಮೋಹನ ಆಳ್ವರಿಗೆ ‘ಮಹಾಪೋಷಕ’ ಪ್ರಶಸ್ತಿ ಪ್ರದಾನ

ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ 11ನೇ ವರ್ಷದ ‘ಪಟ್ಲ ಸಂಭ್ರಮ – 2026’ ಕಾರ್ಯಕ್ರಮವು ಮೇ 30 ರಂದು ಅಡ್ಯಾರ್ ಗಾರ್ಡನ್‌ನಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಖ್ಯಾತ ಶಿಕ್ಷಣ ತಜ್ಞ ಡಾ. ಎಂ. ಮೋಹನ ಆಳ್ವ ಅವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ 2026 ನೀಡಿ ಗೌರವಿಸಲಾಯಿತು. ಹಾಗೂ ಹಿರಿಯ ಕಲಾವಿದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರಿಗೆ 1 ಲಕ್ಷ ರೂ. ನಗದು ಹಾಗೂ ಯಕ್ಷಧ್ರುವ ಪಟ್ಲ ಪ್ರಶಸ್ತಿ 2026 ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ. ಮೋಹನ ಆಳ್ವರವರು “ಜಾನಪದ ಕಲೆಗಳಲ್ಲಿ ಯಕ್ಷಗಾನ ನಂಬರ್ ಒನ್ ಸ್ಥಾನದಲ್ಲಿದೆ. ಅದು ಎಂದಿಗೂ ಸೊರಗದ ಶ್ರೀಮಂತ ಕಲೆ. ಪಟ್ಲರು ಭಾಗವತರಾಗಿ, ಮದ್ದಲೆಗಾರರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

“ಕಲಾಸೇವೆಯ ನಿವೃತ್ತಿಯ ಅಂಚಿನಲ್ಲಿದ್ದ ನನಗೆ ಈ ಪಟ್ಲ ಪ್ರಶಸ್ತಿಯ ಸನ್ಮಾನವು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.” — ಎಂದು ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಹೇಳಿದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಟ್ಲ ಟ್ರಸ್ಟ್ ಕಲಾತ್ಮಕವಾಗಿ ಹಾಗೂ ಸಂಘಟನಾತ್ಮಕವಾಗಿ ಅತ್ಯುತ್ತಮವಾಗಿ ಬೆಳೆಯುತ್ತಿದೆ ಎಂದು ಹರಸಿದರು.

ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ, ಯಕ್ಷಗಾನ ಕ್ಷೇತ್ರದಲ್ಲಿ ಪಟ್ಲ ಫೌಂಡೇಶನ್ ಎಲ್ಲರಿಗೂ ನೆರಳು ನೀಡುವ ದೊಡ್ಡ ಮರವಾಗಿ ಬೆಳೆದಿದೆ ಎಂದು ಶ್ಲಾಘಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ಸದಾಶಿವ ಶೆಟ್ಟಿ ಕನ್ಯಾನ ಅವರು ಮಾತನಾಡಿ, ಸಂಸ್ಥೆಗಳು ಪಾರದರ್ಶಕವಾಗಿ ಕೆಲಸ ಮಾಡಬೇಕು ಮತ್ತು ದಾನಿಗಳನ್ನು ಗೌರವಿಸಬೇಕು; ಪಟ್ಲ ಫೌಂಡೇಶನ್ ಇವೆಲ್ಲವನ್ನೂ ಪಾಲಿಸುತ್ತಾ ಕಲಾವಿದರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದರು.

ಕಾಲಮಿತಿ ಯಕ್ಷಗಾನದಿಂದಾಗಿ ಇವತ್ತು ಕಲಾವಿದರು ಬೇರೆ ಉದ್ಯೋಗವನ್ನೂ ಅವಲಂಬಿಸುವಂತಾಗಿದೆ. ಇಂತಹ ಕಲಾವಿದರ ಬದುಕು ಕಟ್ಟಿಕೊಡುವ ಕೆಲಸವನ್ನು ಪಟ್ಲ ಫೌಂಡೇಶನ್ ಮಾಡುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಧಾನ ಸಂಚಾಲಕರಾದ ಶಶಿಧರ ಬಿ. ಶೆಟ್ಟಿ ಉದ್ಘಾಟನಾ ನುಡಿಗಳನ್ನಾಡಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಹಮ್ಮಿಕೊಂಡಿದ್ದ ಈ ಸಮಾರಂಭದಲ್ಲಿ ಒಟ್ಟು ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಳೆದ 11 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 16 ಕೋಟಿ ರೂಪಾಯಿ ಮೌಲ್ಯದ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಸಮಾಜಕ್ಕೆ ಮುಡುಪಾಗಿಡುವ ಮೂಲಕ ಮಹತ್ತರ ಸಾಧನೆ ಮಾಡಿದೆ.

ಬೆಳಿಗ್ಗೆ ಕಾರ್ಯಕ್ರಮವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮದರ್ಶಿಗಳಾದ ಡಾ. ಯಾಜಿ ನಿರಂಜನಭಟ್ ಉದ್ಘಾಟಿಸಿದರು. ವೇದಿಕೆಯಲ್ಲಿ ಚಂಡೀಗಢ ಕಾರ್ಯದರ್ಶಿ ರಾಜೇಶ್ ಪ್ರಸಾದ್ IAS, ಪ್ರೊ. ಎಂ.ಎಲ್. ಸಾಮಗ, ಮುಂಬಯಿ ಉದ್ಯಮಿಗಳಾದ ಕರುಣಾಕರ ಎಂ. ಶೆಟ್ಟಿ, ವೇಣುಗೋಪಾಲ್ ಶೆಟ್ಟಿ, ಅಜಿತ್‌ ಶೆಟ್ಟಿ ಅಂಕಲೇಶ್ವರ, ಸಂಸದ ಕ್ಯಾ| ಬ್ರಿಜೇಶ್ ಚೌಟ, ದಿವಾಕರ ರಾವ್ ಕಟೀಲು, ಯೋಗೀಂದ್ರಭಟ್ ಉಳಿ, ಜಿ. ಶಂಕರ್ ಉಡುಪಿ, ಪಟ್ಲಗುತ್ತು ಮಹಾಬಲ ಶೆಟ್ಟಿ ಸೇರಿದಂತೆ ಪದಾಧಿಕಾರಿಗಳಾದ ಪುರುಷೋತ್ತಮ ಕೆ. ಭಂಡಾರಿ, ಸಿಎ ಸುದೇಶ್ ಕುಮಾರ್ ರೈ, ಡಾ. ಸತೀಶ್ ಭಂಡಾರಿ, ಅಶೋಕ್ ಆರ್. ಶೆಟ್ಟಿ, ದುರ್ಗಾಪ್ರಸಾದ್ ಪಿ.ವಿ., ಬಾಳ ಜಗನ್ನಾಥ ಶೆಟ್ಟಿ, ರವಿಚಂದ್ರ ಶೆಟ್ಟಿ ಮತ್ತು ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Scroll to Top